ನೆನಪೇ.....

ನಿನ್ನ ನೆನಪಿನ ಸುಡುಕೆ೦ಡದ ಕಾವು
ಬೂದಿಯಾಗಿಸಲಿ ನನ್ನ ಒಮ್ಮೆಗೆ.......
ಆಗಿಷ್ಟು ಈಗಿಷ್ಟು ಕಿಚ್ಚ ಹಚ್ಚಿ
ಹುಚ್ಚನೆಬ್ಬಿಸುವುದು ಹೀಗೇಕೆ...?
ನನ್ನ ನೆನಪಿನ೦ಗಳದಿ ತು೦ಬಿದ ನಕ್ಷತ್ರದ ಮಧ್ಯೆ
ನಗುವಚ೦ದ್ರನ೦ತಿದ್ದೆ ನೀ.....
ನಿನ್ನ ಶೀತಲ ಕೋಮಲ ತಮ್ಮೆಲರಿನ ತ೦ಪಿಗೆ ಹಾಯೆ೦ದಿದ್ದೆ ,
ದೂರವೇ ನಿ೦ತು ನಿನ್ನ ನಿರುಕಿಸಿ ನಲಿಯುತ್ತಿದ್ದೆ ನಿತಾ೦ತವೂ ನಾ....
ಯಾರದೋ ಸ್ವಾರ್ಥ ಪತಿಷ್ಠೆಯ ಕಾಡ್ಗಿಚ್ಚಿಗೆ ಬಲಿಯಾಗಿತ್ತಲ್ಲವೇ
ನಮ್ಮೊಲವಿನ ತೆಳು ಪಲ್ಲವಗಳ ಲತೆ...
ಲತೆ ಬಾಡಿದರೇನಾಯ್ತು...
ಮತ್ತೆ ಹೊಸ ಚಿಗುರ ತರಬುಹುದಿತ್ತಲ್ಲವೇ ಅದರ ಹಳೆಯ ಬೇರು.....?
ನನ್ನೆದೆಯ ಭಿತ್ತಿಯ ಮೇಲಿನ ಕರಿಗೆರೆಗಳಿಗೆ
ತು೦ಬಿದ್ದೆ ನೀ ಸಾವಿರ ಸಾವಿರ ಬಣ್ಣವ
ಈಗಲೂ ಛಿದ್ರ ಛಿದ್ರ ಭಿತ್ತಿಯ ತು೦ಬ ಬಣ್ನವಿಹುದು...
ಸಾವಿರ ರ೦ಗಿನ ಕಾಮನ ಬಿಲ್ಲಲ್ಲ...
ಬರೀ ಕೆ೦ಪು ಬಣ್ಣದ ನೆತ್ತರು....
ನನ್ನ ಭಾವನೆಗಳ ಸು೦ದರ ಸಾಲುಗಳ ಓ ನನ್ನ ಕವಿತೆಯೇ...
ನನ್ನೆದೆಯ ಭಿತ್ತಿಯ ವರ್ಣಚಿತ್ರವೇ...
ನನ್ನೊಲವಿನ ಲತೆಯೇ.. ನೀ ಮಾಡಿದ್ದು ಸರಿಯೇ...?
ನೀನೀಗ ಇಲ್ಲಿಲ್ಲ.... ಇರದೇ.. ಬರಿದೇ ... ಇಲ್ಲವಾದೆ...
ನಾನು ಇಲ್ಲೇ ಇರುವೆ.. ಇದ್ದೂ ಇಲ್ಲವಾಗಿರುವೆ.....
- ಪ್ರೇಮಾ

2 comments:

Unknown said...

ನಿಮ್ಮ ಕವನ ಕಲೆ ಹೀಗೆ ಅರಳುತಿರಲಿ....

ಸೀತಾರಾಮ. ಕೆ. / SITARAM.K said...

ಬೆರೆತ ಜೀವಗಳೆರಡ ದೈನ೦ದಿನ ಸ೦ರ್ಘಷ ಆಪ್ತತೆಯ ಆದ್ರತೆಯಾಗಿ ಹೊಮ್ಮಿದೆ. "ಲತೆ ಬಾಡಿದರೇನಾಯ್ತು...
ಮತ್ತೆ ಹೊಸ ಚಿಗುರ ತರಬುಹುದಿತ್ತಲ್ಲವೇ ಅದರ ಹಳೆಯ ಬೇರು.....?"-ಹೊಸ ಪಲ್ಲವಕ್ಕೆ ಕೊಡುವ ಕರೆ ಮನ ಮೀಟುತ್ತದೆ. ದೂರಾದ ಮನಗಳ ಮಿಲನಕ್ಕೆ ನಾ೦ದಿಯಾಗುವಲ್ಲಿ ಕವನ ಮಹತ್ತರ ಪಾತ್ರ ವಹಿಸುತ್ತದೆ.