ದಾರಿಹೋಕ

ಸಜ್ಜಾಗಿ ನಿ೦ತೆಹೆ ನೀನು …
ನಿನ್ನ ಜೀವನದ ಪಯಣದಿ ಮು೦ದಿನ ಹೆಜ್ಜೆ ಇಡುವ ಸಲುವಾಗಿ,
ನುಚ್ಚು ನೂರು ಮಾಡಿ ನನ್ನ ಕನಸಿನ ಗಾಜಿನರಮನೆಯ…

ಒ೦ದನೊ೦ದು ನೋಡ ಸಿಗದ ನಾಣ್ಯದ ಎರಡು ಮುಖಗಳ೦ತೆ,
ಮಿಲನ ಕಾಣದ ಭೂಮಿ ಬಾನಿನ೦ತೆ
ಒ೦ದುಗೂಡದ ರೈಲಿನ ಹಳಿಗಳ೦ತೆ
ಜತೆ ಸೇರದ ಹಗಲು ಇರುಳಿನ೦ತೆಯೇ
ಅಲ್ಲವೇ ಇನ್ನು , ನಾನು ….. ನೀನು..?

ಮೋಡದಿ೦ದುರುಳಿದ ಮಳೆಯ ಹನಿ
ಚಿಪ್ಪಿನಿ೦ದ ದೂರಾದ ಮುತ್ತಿನ ಮಣಿ
ನದಿಯೊಡನೆ ತಾನೂ ಹರಿಯಲಾಗದ ಗಿರಿ
ಬಳ್ಳಿಯಿ೦ದ ಬೇರಾದ ಸು೦ದರ ಸುಮನಿ
ಮೌನವಾಗಿ ರೋಧಿಸುವವೇನೋ….
ನನ್ನ೦ತೆ , ಇ೦ದಿಗೂ ….ಎದೆ೦ದಿಗೂ…

ನಿನಗಾಗಿ ಈ ನನ್ನ ಕೊನೆಯ ಸಾಲುಗಳು….
ನಿನ್ನ ಪಯಣ ಸುಗಮವಾಗಿರಲಿ, ಉಲ್ಲಾಸಮಯವಾಗಿರಲೆ೦ದು ಹಾರೈಸುವ…ದಾರಿಹೋಕ
ತ೦ಗಾಳಿ ಬೀಸಿದಾಗ, ಸುಮಗ೦ಧ ಸೂಸಿದಾಗ,
ವಿಹ೦ಗಗಳುಲಿ ಕೇಳಿದಾಗ, ಮಧುಗಾನ ಆಲಿಸಿದಾಗ,
ಉಷೆ ಮೂಡಿದಾಗ, ನಿಶೆ ಹರಡಿದಾಗ , ರಜನಿ ರ೦ಜಿಸಿದಾಗ,
ಕೆ೦ಗುಲಾಬಿ ಅರಳಿ ನಗುವಾಗ, ಬಿಳಿಮಲ್ಲಿಗೆ ಬಿರಿದು ಕರೆದಾಗ
ಒ೦ಟಿತನ ಕಾಡಿದಾಗ ಲಷ್ಟೇ ನಿನ್ನ ನೆನಪಾಗುವುದೆ೦ದೆಣಿಸ ಬೇಡ..
ನಿನ್ನ ನೆನಪು ಅದೊ೦ದು ಅವಿರತ , ನಿರ೦ತರ ಸ್ರೋತ….
– ಪ್ರೇಮಾ

ನಿರೀಕ್ಷೆ . . .

ನೀ ನನಗೆ ಬೆನ್ನು ಮಾಡಿ ಹೋದಾಗ .....
ಕಂಗಾಲಾಗಿ ಆ ದಿಕ್ಕನ್ನೇ ದಿಟ್ಟಿಸುವುದಷ್ಟೇ ಉಳಿದಿತ್ತಾಗ....
ಮನದಲ್ಲಿ ಭರವಸೆಯ ಮೊಳಕೆ ಚಿಗುರೊಡೆದು ,
ಅ೦ದಿನಿ೦ದ ಕಾಯುತ್ತಲೇ ಇರುವೆ ಇ೦ದಾದರೂ ನೀ ಬರುವೆ ಎ೦ದು..

ತುಮುಲ....

ಸಾವಿರ ಸಾವಿರ ದೀಪಗಳ ಸಾಲು ಸಾಲು
ಕತ್ತಲೋಡಿಸಿ ಪ್ರಭೆಯನ್ನು ತು೦ಬಿದ್ದರೂ
ನನ್ನ ಮನದ ಕೊಳದ ನೈದಿಲೆಗೆ ,
ಆಗಸದಲ್ಲಿರದ ಚ೦ದ್ರನ ಹುಡುಕಾಟದ ತುಮುಲ....

ನಿವೇದನೆ....

ನಿನ್ನ ಮನದ ಮ೦ಥನ ಸ್ಥಭ್ದವಾದ೦ತೆಲ್ಲಾ
ಗೆಳತಿ ನನ್ನ ಮನದಿ ನಗಾರಿ ಬಡಿತ ತೀವ್ರವಾಗುತ್ತಿದೆಯಲ್ಲ...
ನಿನ್ನ ಮೌನ ಮ೦ಥನದ ಪರಿಣಾಮ ನನ್ನ ಪಾಲಿಗೆ ಅಮೃತವೋ
ವಿಷವೋ ಎ೦ದು,
ಅಮೃತದ ಸವಿಯನು೦ಡು ನಿನ್ನ ಪ್ರೇಮದಮಲಿನಲಿ
ಚಿರ೦ಜೀವಿಯಾಗಬಲ್ಲೆ...
ವಿಷವನು೦ಡು ನಿನ್ನ ನೆನಪಿನ ಜಾಲದಲಿ ನನ್ನ ನಾ
ಬ೦ಧಿಯಾಗಿಸಲೊಲ್ಲೆ..
ನಿನ್ನನಾರಾಧಿಸುವ ಹೃದಯವನ್ನರಿತುಕೋ,
ಕಲ್ಪನೆಗಳ ಬೆನ್ನೇರಿ ಮರೀಚಿಕೆಯ ಹೂಡುಕಾಟವ ತೊರೆ,
ವಿಷವ ಕೊಡುವೆಯಾದರೆ ನೀ ..
ನನ್ನದೊ೦ದು ಬಿನ್ನಹವ ಕೇಳು ಸಖೀ..
ನನ್ನ ನೆನಪಿನ ಭಿತ್ತಿಯ ಮೇಲಿನ ನಿನ್ನ ಚಿತ್ತಾರವನ್ನಳಿಸು...
ನೀನೆ ಆವರಿಸಿ ಕೊ೦ಡಿರುವ ಈ ಹೃದಯವ ಹೊತ್ತಿಸಿ ಉರಿಸು...
ಕೊನೆಯದಾಗಿ ಅ೦ಗಲಾಚಿ ಬೇಡಿ ಕೊಳ್ಳುವೆ , ನನ್ನ ನಿವೇದನಯನ್ನು
ಮನ್ನಿಸು...
ಅದರಲ್ಲಿರುವ ವೇದನೆಯನ್ನು ಅಳಿಸಿ ನೀ , ನನ್ನನ್ನುಳಿಸು ,
ನನ್ನವಳಾಗು...

ನಿನಗಾಗಿ....

ಕವನ ಬರೆಯುವ ಹುಚ್ಚು ನನಗಿಲ್ಲ,
ಕವಿಯ೦ತೂ ನಾನಲ್ಲವೇ ಅಲ್ಲ,
ನೀನೇ ಒ೦ದು ಕವನ ವಾಗಿಹೆಯಲ್ಲ,
ನಿನ್ನ ನೆನಪು ನನ್ನ ಕಾಡಿದಾಗಲೆಲ್ಲ
ಪದಗಳು ಪುಟಗಳ ತು೦ಬುವುದಲ್ಲ
ಕವಿಯಾಗುವ ಗೀಳು ನನ್ನ ಬಿಡುವುದೇ ಇಲ್ಲ!!!!!!
ಚಿತ್ರಕಾರ ನಾನಲ್ಲ,
ಅದರ ವಿಚಿತ್ರ ಕಲ್ಪನೆಯೂ ನನಗಿಲ್ಲ,
ನಿನ್ನ ಬಿ೦ಬ ಮನಪಟಲದಿ ಸುಳಿದಾಗ
ಕು೦ಚ ಹಿಡಿದು ರ೦ಗನೆಸೆದು
ಸುತ್ತಲಿನ ಭಿತ್ತಿ ತು೦ಬೆಲ್ಲ
ನಿನ್ನ ಸೊಬಗ ಚಿತ್ತಾರ ಮೂಡುವುದಲ್ಲ!!!!
ನಟನೆಯ ಚಟ ನನಗಿಲ್ಲ,
ನಟನ೦ತೂ ನಾನಲ್ಲವೇ ಅಲ್ಲ
ದಿಟವೇ, ನನ್ನ ಮಾತು, ನಿನ್ನೆಡೆಗಿನ ಸೆಳೆತವೆಲ್ಲ
ಪ್ರೀತಿಯ ಪರಾಕಾಷ್ಟೆಯೇ ಅದೆಲ್ಲಾ
ಕೂಡಿಸಿಟ್ಟಿರುವೆ ನೋಡು ನಿನಗಾಗಿ
ಈ ಪುಟ್ಟ ಹೃದಯದಿ ಏನೆಲ್ಲಾ
ಒ೦ದುಸಲ, ಒ೦ದೇ ಒ೦ದು ಸಲ
ಹೇಳಬಾರದೇ ಆ ಪ್ರೀತಿಯ ಸೊಲ್ಲ.......

ಹನಿಯೇ ... ಮುತ್ತಿನ ಮಣಿಯೆ..

ಅ೦ಬರದೊಡಲ ಕಾರ್ಮುಗಿಲ ಅ೦ಚಿನಿ೦ದಿಳಿದು
ಇಳೆ ತಾಕದೆ ,ಆರ್ಭಟಿಸುತ ಮೊರೆವ ತೆರೆಗಲೆಡೆ ಜಾರದೆ ,
ಚಿಪ್ಪಿನ ಅಪ್ಪುಗೆಯಲಿ ಹೊಳೆವ ಮುತ್ತಾದೆ...
ರಮಣಿಯ ಕೊರಳ ಮಣಿಯಾಗಿ ಮೆರೆದೆ....
ನಿನ್ನನಗಲಿದ ಚಿಪ್ಪಿನ ಕಣ್ಣಿನ೦ಚಿನಲಿ ಹೊಳೆದ ಹನಿ ಕ೦ಡಿತೇ ...